ಕನ್ನಡ ಸಾಹಿತ್ಯ ಸಮ್ಮೇಳನಗಳು : ಕರ್ಣಾಟಕ ಭಾಷಾ ಸಂಸ್ಕರಣಕ್ಕಾಗಿಯೂ ಕರ್ಣಾಟಕ ಗ್ರಂಥಾವಳಿಯ ಅಭಿವೃದ್ಧಿಗಾಗಿಯೂ ಬೆಂಗಳೂರಿನಲ್ಲಿ ಕರ್ಣಾಟಕ ಸಾಹಿತ್ಯ ಪರಿಷತ್ತು ಎಂಬ ಹೆಸರಿನ ಪ್ರಧಾನ ಸಭೆಯೊಂದನ್ನು ಸ್ಥಾಪಿಸಬೇಕೆಂದು ಬೆಂಗಳೂರಿನಲ್ಲಿ 1915 ಮೇ 3ರಂದು ಸರ್ಕಾರಿ ಪ್ರೌಢಶಾಲೆಯ ವಿಶಾಲವಾದ ಹಜಾರದಲ್ಲಿ ಸೇರಿದ ಸಮ್ಮೇಳನದಲ್ಲಿ ತೀರ್ಮಾನವಾಯಿತು. ಆ ಸಮ್ಮೇಳನದ ಅಧ್ಯಕ್ಷತೆಯನ್ನು ರಾಜಮಂತ್ರಪ್ರವೀಣ ಎಚ್.ವಿ. ನಂಜುಂಡಯ್ಯನವರು ವಹಿಸಿದ್ದರು. ಕರ್ಣಾಟಕ ಭಾಷಾಸಂಸ್ಕರಣಕ್ಕೂ ಕರ್ಣಾಟಕ ಗ್ರಂಥಾಭಿವೃದ್ಧಿಗೂ ಅನುಕೂಲವಾಗುವಂಥ ಸಂಘವನ್ನು ಸ್ಥಾಪಿಸಲೋಸುಗ ಕನ್ನಡ ನಾಡಿನ ಪ್ರಮುಖರೆಲ್ಲ ಈ ಸಮ್ಮೇಳನಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು. ಅಂದೇ ಸಾಹಿತ್ಯ ಪರಿಷತ್ತು ಅಸ್ತಿತ್ವಕ್ಕೆ ಬಂದದ್ದು. ಅದೇ ಪ್ರಪ್ರಥಮ ಸಾಹಿತ್ಯ ಸಮ್ಮೇಳನ. ಅಂದಿನ ಸಮ್ಮೇಳನದಲ್ಲಿ ಭಾಷಾಸಾಹಿತ್ಯಗಳ ಅಭಿವೃದ್ಧಿ ಮಾರ್ಗವನ್ನು ಕುರಿತು ಅನೇಕ ಮಂದಿ ವಿದ್ವಾಂಸರಿಂದ ಲೇಖನಗಳನ್ನು ತರಿಸಿ ಸಭೆಯಲ್ಲಿ ಓದಿ ಚರ್ಚಿಸಲಾಯಿತು.
ಈ ಸಂಪ್ರದಾಯವನ್ನು ಅನುಸರಿಸಿ ಕನ್ನಡ ಸಾಹಿತ್ಯ ಪರಿಷತ್ತು ಪ್ರತಿವರ್ಷವೂ ಕನ್ನಡ ನಾಡಿನ ಒಂದೊಂದು ಮುಖ್ಯ ಪಟ್ಟಣಗಳಲ್ಲಿ ಕನ್ನಡ ಭಾಷಾಭಿಮಾನಿಗಳ ಸಮ್ಮೇಳನಗಳನ್ನು ನಡೆಯಿಸುತ್ತ ಬಂದಿದೆ. 2003 ವರೆಗೆ 76 ಸಮ್ಮೇಳನಗಳು ನಡೆದಿವೆ. ಸಮ್ಮೇಳನಗಳು ನಡೆದ ಸ್ಥಳ, ಅಧ್ಯಕ್ಷರುಗಳ ಪಟ್ಟಿಯನ್ನು ಮುಂದೆ ಕೊಡಲಾಗಿದೆ.

ಸಮ್ಮೇಳನಗಳ ಕಾರ್ಯವಿವರಣೆ ಸ್ಥೂಲವಾಗಿ ಈ ರೀತಿಯಿದೆ : ಈ ಸಮ್ಮೇಳನಗಳ ಅಧ್ಯಕ್ಷತೆಗೆ ಪ್ರಮುಖರಾದ ಕನ್ನಡ ಭಾಷಾಭಿಮಾನಿಗಳೊಬ್ಬರನ್ನು ಆರಿಸಲಾಗುತ್ತದೆ. ಅಧ್ಯಕ್ಷರಾಗಿ ಆಯ್ಕೆಯಾದವರು ಸಾಮಾನ್ಯವಾಗಿ ತಮ್ಮ ಭಾಷಣದಲ್ಲಿ ಕನ್ನಡ ಭಾಷೆಯ ಸದ್ಯದ ಪರಿಸ್ಥಿತಿಯನ್ನು ವಿವರಿಸಿ ಕನ್ನಡ ಭಾಷೆಯ ಮತ್ತು ದೇಶದ ಅಭಿವೃದ್ಧಿಸ್ಥಿತಿಯನ್ನು ಕುರಿತು ಕರ್ಣಾಟಕದ ನಾನಾ ಭಾಗಗಳಲ್ಲಿಯ ಕನ್ನಡಿಗರಲ್ಲಿ ಸೌಹಾರ್ದ ಹುಟ್ಟುವಂತೆ ಉಪನ್ಯಾಸ ಮಾಡುವರು. ಇದಲ್ಲದೆ. ನಾನಾ ಪ್ರಾಂತ್ಯಗಳಿಂದ ಸಮ್ಮೇಳನಕ್ಕೆ ಬಂದ ಕನ್ನಡಿಗರು ಕನ್ನಡ ಭಾಷೆಯ ಮತ್ತು ದೇಶದ ಏಳಿಗೆಗಾಗಿ ಆವಶ್ಯಕವೆಂದು ತೋರುವ ಅನೇಕ ಗೊತ್ತುವಳಿಗಳನ್ನು ಮಾಡುವರು. ಇದನ್ನು ಪರಿಷತ್ತು ಆಯಾ ಅಧಿಕಾರಿಗಳಿಗೆ ತಿಳಿಯಪಡಿಸಿ ಅವರಿಂದ ಬಂದ ಉತ್ತರಗಳನ್ನು ಮುಂದಿನ ಸಮ್ಮೇಳನದ ಮುಂದೆ ಇಡುತ್ತದೆ. ಈ ಮೂರು ದಿನಗಳ ಸಮ್ಮೇಳನದಲ್ಲಿ ನಾನಾ ಪ್ರಾಂತ್ಯಗಳಿಂದ ವಿದ್ವಾಂಸರು ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಕುರಿತ ವಿದ್ವತ್ಪೂರಿತ ಪ್ರಬಂಧಗಳನ್ನು ಬರೆದೋದುವರು. ಇದರ ಜೊತೆಗೆ ಕನ್ನಡ ಲೇಖಕರ ಗೋಷ್ಠಿ, ನಾಟ್ಯ ನಾಟಕ ಗೋಷ್ಠಿ, ಇತಿಹಾಸ ಗೋಷ್ಠಿ, ಮಹಿಳಾ ಗೋಷ್ಠಿ, ವೃತ್ತಪತ್ರಿಕಾ ಕರ್ತರ ಗೋಷ್ಠಿ ಮುಂತಾದ ಹಲವಾರು ಗೋಷ್ಠಿಗಳು ನಡೆಯುತ್ತವೆ. ಈ ಎಲ್ಲ ಗೋಷ್ಠಿಗಳಲ್ಲೂ ಸಮ್ಮೇಳನಾಧ್ಯಕ್ಷರು ಅಗ್ರಸ್ಥಾನದಲ್ಲಿರುತ್ತಾರೆ. ಇವುಗಳ ಜೊತೆಗೆ ಮನೋರಂಜನೆ ಕಾರ್ಯಕ್ರಮದ ಅಂಗವಾಗಿ ಕನ್ನಡ ಲಾವಣಿ, ಸಂಗೀತ, ನಾಟಕ ಮುಂತಾದವೂ ಪ್ರದರ್ಶಿಸಲ್ಪಡುತ್ತವೆ.
ಹಿಂದೆ ಸಮ್ಮೇಳನಾಧ್ಯಕ್ಷರಿಗೂ ಪರಿಷತ್ತಿನ ಕಾರ್ಯಕಾರಿ ಸಮಿತಿಗೂ ನಿಕಟ ಸಂಬಂಧವಿರಲಿಲ್ಲ. ಸಮ್ಮೇಳನದಲ್ಲಾದ ಗೊತ್ತುವಳಿಗಳನ್ನು ಆಚರಣೆಗೆ ತರುವುದರಲ್ಲಾಗಲಿ, ಪರಿಷತ್ತಿನ ಧೋರಣೆಯನ್ನು ರೂಪುಗೊಳಿಸುವುದರಲ್ಲಾಗಲಿ ಅವರಿಗೆ ಸ್ಥಾನವಿರಲಿಲ್ಲ. ಈಚೆಗೆ ಈ ಸ್ಥಿತಿ ಮಾರ್ಪಟ್ಟಿದೆ. ಸಮ್ಮೇಳನದ ಅಧ್ಯಕ್ಷರು ಕಾರ್ಯಸಮಿತಿಯ ಸದಸ್ಯರಾಗಿರಬೇಕೆಂಬ ಒಂದು ತೀರ್ಮಾನವನ್ನು 1939ರಲ್ಲಿ ಅಂಗೀಕರಿಸಲಾಯಿತು. ಎರಡನೆಯದಾಗಿ ಪರಿಷತ್ತಿನ ಅಧ್ಯಕ್ಷರು ತಾವು ನಡೆಸುವ ಮುಖ್ಯ ಕಾರ್ಯಗಳ ವಿವರಗಳನ್ನು ಆಗಿಂದಾಗ್ಗೆ ಸಮ್ಮೇಳನಾಧ್ಯಕ್ಷರಿಗೆ ತಿಳಿಸಿ, ಅವರ ಸಲಹೆ ಪಡೆಯುವುದು ರೂಢಿಗೆ ಬಂದಿದೆ. ಇವರು ಸ್ವತಂತ್ರವಾಗಿಯೋ ಅಧ್ಯಕ್ಷರ ಜೊತೆಯಲ್ಲಿಯೋ ನಾಡಿನಲ್ಲಿ ಪ್ರವಾಸ ಮಾಡಿ ಪರಿಷತ್ತಿನ ಧ್ಯೇಯಗಳನ್ನು ಜನಸಾಮಾನ್ಯರಲ್ಲಿ ಹರಡುತ್ತಿದ್ದಾರೆ.

ಸಮ್ಮೇಳನಗಳು ಕರ್ಣಾಟಕದ ಎಲ್ಲ ಪ್ರಮುಖ ಸ್ಥಳಗಳಲ್ಲೂ ನಡೆದಿವೆ. ಕನ್ನಡಿಗರು ಅಧಿಕ ಸಂಖ್ಯೆಯಲ್ಲಿರುವ ಹೊರನಾಡಿನಲ್ಲೂ ನಡೆದಿವೆ. ನಾಡಿನ ಸುಪ್ರಸಿದ್ಧ ಸಾಹಿತಿಗಳು ಅಧ್ಯಕ್ಷರಾಗಿದ್ದಾರೆ. ಸಹಸ್ರ ಸಂಖ್ಯೆಯಲ್ಲಿ ಜನ ಸೇರಿ ಸಮ್ಮೇಳನಗಳ ಕಾರ್ಯ ಕಲಾಪಗಳನ್ನು ವೀಕ್ಷಿಸಿದ್ದಾರೆ; ಶುದ್ಧ ಮಾದರಿಯ ಮನೋರಂಜನ ಕಾರ್ಯಕ್ರಮಗಳನ್ನು ನೋಡಿ ಆನಂದಿಸಿದ್ದಾರೆ. ಅನೇಕ ಸ್ಥಳೀಯರು ಸಕ್ರಿಯವಾಗಿ ಭಾಗವಹಿಸಿದ್ದಾರೆ. 

ಸಮ್ಮೇಳಾನಾಧ್ಯಕ್ಷರ ನುಡಿಗಳು

ಕನ್ನಡದ ಸರ್ಮತೋಮುಖವಾದ ಬೆಳವಣಿಗೆಯ ಬಗ್ಗೆ ಅಧ್ಯಕ್ಷರು ನೀಡಿರುವ ವಿಸ್ತೃತವೂ ವಿದ್ವತ್ಪೂರ್ಣವೂ ಆದ ಭಾಷಣಗಳಿಂದ ಆಯ್ದ ಕೆಲವು ಭಾಗಗಳನ್ನು ಇಲ್ಲಿ ಕೊಡಲಾಗಿದೆ.

ಕನ್ನಡ ಭಾಷೆಯು ಮೈಸೂರು ಸಂಸ್ಥಾನದವರಿಗೆ ಮಾತ್ರವೇ ಸೇರಿರುವುದಾಗಿಲ್ಲ. ಕನ್ನಡವನ್ನು ಮಾತನಾಡುವುದರಲ್ಲಿ ಅರ್ಧಪಾಲಿಗಿಂತಲೂ ಹೆಚ್ಚು ಮಂದಿ ಸಂಸ್ಥಾನದ ಸುತ್ತಮುತ್ತಲೂ ಇವರು ಬ್ರಿಟಿಷ್ ಇಂಡಿಯಾದಲ್ಲಿಯೂ ಹೈದರಾಬಾದ್ ಸಂಸ್ಥಾನದಲ್ಲಿಯೂ ವಾಸಿಸುತ್ತಿರುವರು. ರಾಜಕೀಯ ವಿಷಯಗಳಲ್ಲಿ ಮೂರು ನಾಲ್ಕು ಸರ್ಕಾರದವರಿಗೆ ಅಧೀನವಾಗಿದ್ದರೂ ಬೇರೆಬೇರೆಯಾಗಿ ಕಾಣುವ ಕನ್ನಡ ನಾಡುಗಳಲ್ಲಿಯೂ ಕನ್ನಡ ಮಾತನಾಡುವವರಲ್ಲಿಯೂ ಕೆಲವು ಸಾಮಾನ್ಯ ಲಕ್ಷಣಗಳು ಕಾಣಬರುತ್ತವೆ. ಆದುದರಿಂದ ಭಾಷಾಭಿವೃದ್ಧಿ. ಗ್ರಂಥರಚನೆ ಇವುಗಳ ವಿಷಯದಲ್ಲಿ ಕನ್ನಡಡಿಗರೆಲ್ಲರನ್ನೂ ಒಟ್ಟುಗೂಡಿಸಿದರೆ, ವಿಶೇಷ ಪ್ರಯೋಜನವುಂಟು. ಈ ಉದ್ದೇಶದಿಂದಲೇ, ಕನ್ನಡ ಭಾಷಾಭಿವೃದ್ಧಿಯಲ್ಲಿ ಆಸಕ್ತರಾಗಿಯೂ ಸಮರ್ಥರಾಗಿಯೂ ಕಾರ್ಯಭಾರವನ್ನು ವಹಿಸಲು ತಕ್ಕವರಾಗಿಯೂ ಇರುವ ಜನಗಳು ಸೇರಿ, ಅನ್ಯೋನ್ಯ ಸಹಾಯದಿಂದ ಒಟ್ಟುಗೂಡಿ ಕೆಲಸ ಮಾಡತಕ್ಕ ಒಂದು ಸಭೆಯನ್ನು ಸರ್ಕಾರದ ಸಂಬಧವಿಲ್ಲದೆ ನಿರ್ಮಿಸಬೇಕೆಂದು ಈ ಸಮ್ಮೇಳನವನ್ನು ಏರ್ಪಾಡು ಮಾಡಲಾಗಿದೆ.	             - ಎಚ್. ವಿ. ನಂಜುಂಡಯ್ಯ

ಪುರ್ವದಂತೆ ಉದ್ದಾಮಕವಿಗಳು ಹುಟ್ಟಬೇಕೆಂದಾಗಲಿ, ಪುರ್ವದಂತೆ ರಾಜರೂ ಮಾಂಡಲಿಕರೂ ಅಧಿಕಾರಿಗಳೂ ಪ್ರೋತ್ಸಾಹಕರಾಗಬೇಕೆಂದಾಗಲಿ ಹಾರೈಸುವುದರಿಂದ ಫಲವಿಲ್ಲ. ಪ್ರಕೃತ ಕಾಲಕ್ಕೆ ಅನುಗುಣವಾಗಿ ಕನ್ನಡಿಗರೆಲ್ಲರೂ ಅಸಡ್ಡೆಯನ್ನು ತೊಲಗಿಸಿ ಭಾಷಾಸೇವೆಯಲ್ಲಿ ನಿರತರಾಗಬೇಕು. ಪಂಡಿತರನ್ನು ಗೌರವಿಸಬೇಕು. ಕನ್ನಡ ನುಡಿಗಾಗಿ ಶ್ರಮಪಡುವವರಿಗೆ ಮರ್ಯಾದೆಯನ್ನು ಮಾಡಬೇಕು. ಸಾಹಿತ್ಯವನ್ನು ವೃದ್ಧಿಗೊಳಿಸುವುದಕ್ಕಾಗಿ ಶಾಸ್ತ್ರೀಯ ಗ್ರಂಥಗಳೇ ಮೊದಲಾದುವನ್ನು ಅನ್ಯಭಾಷೆಗಳಿಂದ ಪರಿವರ್ತಿಸಬೇಕು. ಕೋಶಗಳನ್ನೂ ಸಾಂಕೇತಿಕ ಶಬ್ದಗಳ ಪಟ್ಟಿಯನ್ನೂ ಏರ್ಪಡಿಸಬೇಕು. ಗ್ರಂಥಸ್ಥ ಭಾಷೆಗೆ ಏಕರೂಪತೆಯನ್ನು ಉಂಟುಮಾಡಬೇಕು. ವಿದ್ಯಾವಂತನಾದ ಪ್ರತಿಯೊಬ್ಬ ಕನ್ನಡಿಗನೂ ತನಗಿಂತ ವಿದ್ಯೆಯಲ್ಲಿ ಕಡಿಮೆಯಾದ ಕನ್ನಡಿಗರ ಉಪಯೋಗಾರ್ಥವಾಗಿ ಗ್ರಂಥ ನಿರ್ಮಾಣವನ್ನು ಮಾಡುವುದು ತನ್ನ ಕರ್ತವ್ಯವೆಂದು ತಿಳಿಯಬೇಕು. e್ಞÁನವೃದ್ಧಿಕರವಾದ ಪತ್ರಿಕೆಗಳನ್ನು ಹೊರಡಿಸಬೇಕು. ಭಾಷೆಯ ಏಕೀಭಾವ, ಪರಸ್ಪರ ಮೈತ್ರಿ, ಮುದ್ರಣ ಸೌಕರ್ಯ, ಗ್ರಂಥ ಪ್ರಚಾರಕ್ಕೆ ಅನುಕೂಲ್ಯ ಇವುಗಳನ್ನು ಉಂಟು ಮಾಡುವುದಕ್ಕಾಗಿ ಗ್ರಂಥಕರ್ತರ ಮತ್ತು ಪತ್ರಿಕಾ ಸಂಪಾದಕರ ಒಂದು ಸಂಘವನ್ನು ಏರ್ಪಡಿಸಬಹುದು. ಎಲ್ಲ ಕರ್ಣಾಟಕ ಭಾಗಗಳ ವಿದ್ವಾಂಸರನ್ನು ಸೇರಿಸಿ ಒಂದು ಗ್ರಂಥಪರಿಶೀಲಕ ಮಂಡಲಿಯನ್ನೂ ಏರ್ಪಡಿಸಬಹುದು. 

ಈಗಲಾದರೋ ಕನ್ನಡ ನುಡಿ, ನಾವು ಪುರ್ವದಲ್ಲಿ ಭಾಷೋನ್ನತಿಗಾಗಿ ಉತ್ಕಟೇಚ್ಛೆಯಿಂದ ಕೃತಿ ಮಾಡಿದ ಕನ್ನಡಿಗರ ಸಂತತಿಯವರೋ ಅಲ್ಲವೋ ಎಂದು ಸಂದೇಹಪಡಬಹುದಾದಷ್ಟು ಹೀನ ಸ್ಥಿತಿಗೆ ಬಂದಿದೆ. ಈ ಹೀನ ಸ್ಥಿತಿಯನ್ನು ನೋಡಿ ಯಾವ ನಿಜವಾದ ಕನ್ನಡಿಗರ ಹೃದಯ ತಾನೇ ಶೋಕರಸಪುರಿತವಾಗದು? ಯಾವ ಭಾಷಾಭಿಮಾನಿಯಾದ ಕನ್ನಡಿಗನ ಕಣ್ಣು ತಾನೇ ನೀರಿನಿಂದ ತುಂಬದು?
				   - ಆರ್. ನರಸಿಂಹಾಚಾರ್ಯ

ಇಟ್ಟಗೆಗಳು ಒಂದಕ್ಕೊಂದನ್ನಂಟಿಸಿ ಭದ್ರಪಡಿಸುವ ಗಾರೆಯಂತೆ ಭಾಷೆಯು ಜನರನ್ನು ಸೇರಿಸತಕ್ಕ ಒಂದು ಆಂಟು. ಮಂಗಳೂರಿನವರಿಗೂ ಧಾರವಾಡದವರಿಗೂ ಮೈಸೂರಿನವರಿಗೂ ಸಂಬಂಧವೇನು ? ಅವರನ್ನು ಇಲ್ಲಿ ಸೇರುವಂತೆ ಮಾಡಿದುದಾವುದು ? ಕನ್ನಡ ನುಡಿಯಲ್ಲವೆ ? ಇಟ್ಟಿಗೆಯ ಬಲವೂ ಗಾರೆಯ ಅಂಟೂ ಹೆಚ್ಚಿದಷ್ಟೂ ಗೋಡೆಯ ಬಲವೂ ಹೆಚ್ಚುವುದಷ್ಟೆ ! ಕನ್ನಡ ನುಡಿಯ ಅಭಿವೃದ್ಧಿಯಾದಷ್ಟೂ ಕನ್ನಡಿಗರ ಬಲವೂ ಅಧಿಕವಾಗುವುದರಲ್ಲಿ ಸಂದೇಹವೇಕೆ ? 		- ಕೆ. ಪಿ. ಪುಟ್ಟಣ್ಣಶೆಟ್ಟಿ

ಭಾಷೆಗೆ ಕುಲವಿಲ್ಲ. ಗೋತ್ರವಿಲ್ಲ, ಮತವಿಲ್ಲ; ಅದು ಎಲ್ಲರಿಗೂ ಸೇರಿದ, ಎಲ್ಲರಿಗೂ ಬೇಕಾದುದು. ಪುರ್ವಕಾಲದಲ್ಲಿ ಎಲ್ಲ ಮತಜಾತಿಗಳವರೂ ಅದರ ಸೇವೆ ಮಾಡಿ ಅದನ್ನು ಬೆಳೆಯಿಸಿದರು. ಈಗಲೂ ನಾವು ನಮ್ಮ ಭೇದಗಳನ್ನು ಬಿಟ್ಟು ಒಮ್ಮನಸ್ಸಿನಿಂದ ಭಾಷಾಸೇವೆಗೆ ನಿಂತರೆ, ಬೇಗನೆ ನಮ್ಮ ಸಾಹಿತ್ಯವು ಪ್ರಪಂಚದಲ್ಲಿ ಮಾನ್ಯ ಸ್ಥಾನವನ್ನು ಪಡೆದು ನಮ್ಮ ದೇಶವು ಸುಖಸಂಪತ್ತುಗಳಿಗೆ ಆವಾಸ ಸ್ಥಾನವಾಗುವುದರಲ್ಲಿ ಸಂದೇಹವಿಲ್ಲ. 
					- ಎಂ. ವೆಂಕಟಕೃಷ್ಣಯ್ಯ

ಸಾಹಿತ್ಯದಲ್ಲಿ ನಡೆಯಬೇಕಾಗಿರುವ ಊಳಿಗವನ್ನು ಮಾತ್ರ ನಾವೆಲ್ಲರೂ ಕೂಡಿ ಮಾಡಿದಲ್ಲದೆ ಸಾಹಿತ್ಯದ ಉತ್ತರೋತ್ತರವು ನೆಟ್ಟಗಾಗಲಾರದು. ಆದುದರಿಂದ ಈವರೆಗೆ ಅಶ್ರದ್ಧೆಯೋ ಸಮಯವಿರೋಧವೋ ವ್ಯಕ್ತಿವೈರವೋ ದೇಶಾಂತರ ವಿವಾದವೋ ವಿಷಯಾಂತರಾಳವೋ ಮತವಿರೋಧವೋ ಏನಿದ್ದರೂ ತೊರೆದು ಮರೆತು ನಮ್ಮ ಸಜ್ಜನಿಕೆಯನ್ನೂ, ಕಾರ್ಯದಕ್ಷತೆಯನ್ನೂ ನೈಪುಣ್ಯವನ್ನೂ ಸಾಹಿತ್ಯವನ್ನೂ ಮರೆಯಲು ನಾವೆಲ್ಲರೂ ನೆರೆಯಬೇಕೆಂಬುದು ನನ್ನ ಸವಿನಯಪ್ರಾರ್ಥನೆ. - ಆರ್. ತಾತಾಚಾರ್ಯ

ಇಂಗ್ಲಿಷ್ ಸಂಸ್ಕಾರದಿಂದ ಅಂಜನ ಹಾಕಿ ಪರೆ ತೆಗೆದ ಹೊಸ ಕಣ್ಣಿನಿಂದ, ಹೊಸ ಬೆಲೆಗಳ ತಿಳಿವಳಿಕೆಯಿಂದ, ವಿಮರ್ಶನ ಮಿಳಿತವಾದ ಶ್ರದ್ಧೆಯಿಂದ, ವೇದಗಳು, ಉಪನಿಷತ್ತುಗಳು, ಇತಿಹಾಸ ಪುರಾಣಗಳು, ದರ್ಶನಗಳು, ಶಾಸ್ತ್ರಗಳು, ಕಲೆಗಳು, ವೈದಿಕ ಬೌದ್ದ ಜೈನ ವೈಷ್ಣವ ಧರ್ಮಗಳು-ಇವುಗಳ ಪವಿತ್ರ ಮೂಲಗಳನ್ನು ಪರಿಶೋಧನೆ ಮಾಡಿ ಹಸಿದು ಕಂಗೆಟ್ಟಿರುವ ನಮ್ಮ ಜನಸಾಮಾನ್ಯಕ್ಕೆ ಶುದ್ಧಹಾರವನ್ನು ದೇಹಪುಷ್ಟಿ, ಆತ್ಮಪುಷ್ಟಿ ಆಗುವ ನಿರ್ಮಲಾಹಾರವನ್ನು ಒದಗಿಸುವುದು ವಿದ್ಯಾವಂತರ ಕರ್ತವ್ಯವಲ್ಲವೆ?		- ಬಿ. ಎಂ. ಶ್ರೀಕಂಠಯ್ಯ

“ಇಂಗ್ಲೀಷು ಮುಖ್ಯ ಭಾಷೆ ಎನ್ನುವುದನ್ನು ಬಿಡುವ ತನಕ ಕನ್ನಡ ಬೆಳೆಯುವುದಿಲ್ಲ. ಗ್ರಂಥಕಾರನು ಸಮಸ್ತ ಪ್ರಜೆಗಾಗಿ ದುಡಿಯುತ್ತಾನೆ. ಸಮಸ್ತ ಪ್ರಜೆಯೂ ಅವನಿಗೆ ಜೀವನವನ್ನು ಕೊಡಬೇಕು. ಬರೆದರಿಗೆಲ್ಲ ಹಿಡಿಹೊನ್ನು ಕೊಡಿ ಎಂದು ನಾನು ಹೇಳುವುದಿಲ್ಲ. ಒಳ್ಳೆಯ ಪುಸ್ತಕವೆಂದು ತೋರಿದರೆ ಒಂದೊಂದು ಪ್ರತಿಗಳನ್ನು ಕೊಳ್ಳಿರಿ ಅಷ್ಟೆ.			- ಮಾಸ್ತಿ ವೆಂಕಟೇಶ ಐಯ್ಯಂಗಾರ್

ಚತುರ್ಮುಖವಾದ ಕರ್ನಾಟಕವು ಏಕಮುಖವಾಗಿದೆ. ಈಗ ಅದರ ನಾಲ್ಕು ಮೋರೆಗಳನ್ನು ಏಕಮುಖವಾಗಿ ಮಾಡುವುದಕ್ಕೋಸ್ಕರ ಅಖಿಲ ಕನಾಟಕ ವಿಶ್ವ ವಿದ್ಯಾಲಯವು ಅವಶ್ಯವಾಗಿ ಬೇಕಾಗಿದೆ.	- ಆಲೂರ ವೆಂಕಟರಾಯರು

“ನಮ್ಮ ಕರ್ನಾಟಕದಲ್ಲಿ ಪ್ರಾಂತ ಭೇದದಿಂದಾಗಿ ನೆಲೆಗೊಂಡ ಕನ್ನಡದ ಕವಲುಗಳು ಹಲವಿರುತ್ತವೆ. ಭಿನ್ನ ಭಾಷೆಗಳ ಸಂಪರ್ಕವೂ ಹಲವಿರುತ್ತದೆ, ಈ ಸ್ಥಿತಿ ಸಾಹಿತ್ಯಾಭಿವೃದ್ಧಿಗೊಂಡು ಬಂದಣಿಕೆಯಂತೆ ಪ್ರಥಮ ದೃಷ್ಟಿಗೆ ತೋರಬಹುದು. ಆ ದೃಷ್ಟಿ ದೋಷಕ್ಕೆ ಹೆದರಬಾರದು. ಕನ್ನಡದ ಕವಲುಗಳನ್ನೆಲ್ಲ ಕರಗಿಸಿ `ದೇಶಿ’ ಯನ್ನಾಗಿ ಮಾಡಬೇಕು. ಪರಭಾಷೆಗಳ ಸಾರವವನ್ನೆಲ್ಲ ಕನ್ನಡದಲ್ಲಿ ತುಂಬಬೇಕು’.			- ಮುಳಿಯ ತಿಮ್ಮಪ್ಪಯ್ಯ

ನಮ್ಮಲ್ಲಿ ಹಳೆಯ ತೆರದ ಪಾಂಡಿತ್ಯವು ಕಡಮೆಯಾಗಕೂಡದೆಂದು ನನ್ನ ಕೋರಿಕೆ. ಲೋಕೋಪಕಾರದ ವಿಸ್ತೀರ್ಣವನ್ನು ಅಳೆದು ನೋಡಿದರೆ ಬಸವಣ್ಣ, ಪುರಂದರ, ಕನಕರುಗಳಿಂದಲೂ ಈಗಿರುವಷ್ಟು ವೇದಾಂತ ತತ್ವ ಪ್ರಚಾರವು ಅನೇಕ ಉಪನಿಷದ್ವಾಖ್ಯಾತರು ಗಳಿಂದ ಆಗಿಲ್ಲವೆಂದು ಧಾರಾಳವಾಗಿ ಹೇಳಬಹುದು. ಕುಮಾರವ್ಯಾಸ, ಕುಮಾರ ವಾಲ್ಮೀಕಿಗಳಿಂದ ಆಗಿರುವಷ್ಟು ಭಾರತ ರಾಮಾಯಣ ಕಥಾ ಪ್ರಸಾರವು ಸಂಸ್ಕೃತದಲ್ಲಿ ವ್ಯಾಖ್ಯಾನ ಬರೆದ ನೀಲಕಂಠ ಗೋವಿಂದ ರಾಜರುಗಳಿಂದ ಆಗಿಲ್ಲವೆಂದು ಹೇಳಬಹುದು. .......ಹಿಂದೆ ಸಂಸ್ಕೃತದಿಂದ ಕನ್ನಡ ಬದುಕಿತು. ಮುಂದಕ್ಕೆ ಕನ್ನಡದಲ್ಲಿ ಸಂಸ್ಕೃತ ಬದುಕಬೇಕು.		- ಡಿ. ವಿ. ಗುಂಡಪ್ಪ

‘ಮಾಧ್ಯಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿಯೇ ಕೊಡಬೇಕೆಂದರೆ ಅದಕ್ಕೆ ಅಡ್ಡಿ ಬರುವವರು ಅನೇಕ ಮಂದಿ. ಇಂಥವರಿಗೆ ಇಂಗ್ಲಿಷ್ ಭಾಷೆಯ ಮೋಹ ಇನ್ನೂ ತಪ್ಪಿಲ್ಲ. ಆದರೆ ಅನೇಕ ವಿಷಯಗಳನ್ನು ತಲೆಯಲ್ಲಿ ತುಂಬಿ ಯಾವುದೂ ಚೆನ್ನಾಗಿ ಹತ್ತದಂತೆ ಮಾಡುವುದಕ್ಕಿಂತ ಕೆಲವು ಉಪಯುಕ್ತ ವಿಷಯಗಳನ್ನು ಮಾತ್ರ ಚೆನ್ನಾಗಿ ಕಲಿಸುವುದು ಉತ್ತಮ. ಇಷ್ಟಪಟ್ಟವರಿಗೆಲ್ಲ ಈ ಮೆಟ್ಟಲವರೆಗೂ ಶಿಕ್ಷಣ ಕೊಡುವುದು ಆವಶ್ಯಕವೆಂದು ತೋರುವುದು. ಇದಕ್ಕೆ ಮುಂದೆ ಹೋಗಬೇಕೆನ್ನುವವರಿಗೆ ಯೋಗ್ಯತೆಯಿದ್ದಲ್ಲಿ ಮಾತ್ರ ಪ್ರವೇಶ ದೊರೆಯುವಂತೆ ಮಾಡಬೇಕು’	- ಬೆಳ್ಳಾವೆ ವೆಂಕಟನಾರಾಯಣಪ್ಪ

ಮಾತೃಭಾಷೆಗೆ ಮೊದಲನೆಯ ಸ್ಥಾನ, ದೇಶಭಾಷೆ ಎರಡನೆಯದು, ಇಂಗ್ಲಿಷು ಮೂರನೆಯದು. ಮಾತೃಭಾಷೆಯ ಮೂಲಕ ಕಲಿತದ್ದೇ ಮೈ ಹತ್ತುವುದು. ಮಾತೃಭಾಷೆಯಲ್ಲಿ ಬಂದದ್ದೇ ನಿಲ್ಲುವುದು, ಮಹಿಳೆಯರು ಕನ್ನಡವನ್ನು ಕಾಪಾಡಿಕೊಂಡು ಬಂದರೆ ಅದು ತಾಯಿ ನುಡಿಯಾಗಿ ಉಳಿಯುತ್ತದೆ. ಕನ್ನಡಿಗರಿಗೆ ಕನ್ನಡ ದೇಶದಲ್ಲಿ ಹಿರಿಯ ಆಸ್ತಿಯಾಗಿ ಉಳಿದಿರುವುದು ಅವರ ಕನ್ನಡ ಭಾಷೆ, ಕನ್ನಡ ದೇಶದಲ್ಲಿ ಕನ್ನಡಕ್ಕೆ ಪ್ರಾಶಸ್ತ್ಯ ಕೊಡದೆ ಹೋದರೆ ಮೆಕ್ಸಿಕೋದೇಶದವರೋ, ನ್ಯೂಜಿಲ್ಯಾಂಡಿನವರೋ ಕೊಡುತ್ತಾರೆಯೆ. . . . .?			- ಎ. ಆರ್. ಕೃಷ್ಣಶಾಸ್ತ್ರೀ

‘ಪರಿಷತ್ತು ಕನ್ನಡದ ಹೃದಯ, ಅದು ಬರಿಯ ಯಂತ್ರವಾಗಬಾರದು. ಒಂದು ಸಂಸ್ಥೆಯೆನಿಸಿಕೊಳ್ಳಬಾರದು. ಎಂಟು ದಿಕ್ಕಿನ ಕನ್ನಡಿಗರಿಂದ ಕೂಡಿ ಅದು ಎಂಟು ಭುಜ, ಎಂಟೆದೆ ಪಡೆಯಬೇಕು.......’	- ದ. ರಾ. ಬೇಂದ್ರೆ

ಕನ್ನಡ ಜನದ ಮೋಕ್ಷ ಕನ್ನಡದ ಮೂಲಕವೇ ಆಗಬೇಕೆಂಬುದು ಸಹಜವಾಗಿದೆ. ‘ನಮ್ಮವರಿಗೆ ಕನ್ನಡ ನುಡಿ, ಕನ್ನಡ ನಾಡು, ಕನ್ನಡ ಕಲೆ, ಕನ್ನಡ ಹಾಡು ಯಾವುದರ ಮೇಲೂ ಅಭಿಮಾನವಿಲ್ಲ, ನನ್ನದೆಂಬ ಹೆಮ್ಮೆ ಇಲ್ಲ. ಆದಕಾರಣದಿಂದಲೇ ನಮ್ಮ ಕಡೆಗೆ ನಾವು ಸಣ್ಣವರಾಗಿ ಕಾಣಬಂದೆವು. ಅಂದ ಮೇಲೆ ನಮ್ಮನ್ನು ಕುರಿತು ನೆರೆಹೊರೆಯವರರು ಮತ್ತಾವ ಕಣ್ಣಿಂದ ಕಂಡಾರು? ಅವರ ಕಣ್ಣಿಗೆ ಮತ್ತಾವ ಭವ್ಯತೆಯನ್ನು ತೋರಿಸಬಲ್ಲೆವು? ನಾವಿಂದು ನಮ್ಮ ನುಡಿಯ, ನಮ್ಮ ನಾಡ, ನಮ್ಮ ದುರವಸ್ಥೆಯನ್ನು ಕಂಡು ವ್ಯಸನ ಪಡುತ್ತಿದ್ದೇವೆ. ಮಾಡದ ಕೆಲಸಕ್ಕಾಗಿ ಪಶ್ಚಾತ್ತಾಪ ಪಡುತ್ತಿದ್ದೇವೆ. ಕಣ್ಣೀರಿಡುತ್ತಾ ಕೂತು ಫಲವಿಲ್ಲ.	-ತಿರುಮಲೆ ತಾತಾಚಾರ್ಯ ಶರ್ಮ

ನಾವು ಯಾವ ಕಾರ್ಯವನ್ನೇ ಮಾಡಲಿ, ಅದು ಕನ್ನಡದ ಸೇವೆಯೆಂದಾಗಬೇಕು		-ಚನ್ನಪ್ಪ ಉತ್ತಂಗಿ

ಲೋಕದ ಆಯಾ ಪ್ರಧಾನ ಭಾಷೆಗಳ ಅಮೂಲ್ಯವಾದ ಗ್ರಂಥಗಳನ್ನು (ಎಲ್ಲವನ್ನಲ್ಲ, ಶ್ರೇಷ್ಠವಾದುವನ್ನು ಮಾತ್ರ) ಕನ್ನಡದಲ್ಲಿ ಅನುವಾದಿಸಬೇಕು.	-ಎಂ. ಗೋವಿಂದ ಪೈ

ಕರ್ನಾಟಕ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಸಾಹಿತ್ಯ ಪರಿಷತ್ತು ಇವೆಲ್ಲ ಪರಸ್ಪರ ಸಹಕಾರದಿಂದ ನಾಡುನುಡಿಗಳ ಹಿತಕ್ಕಾಗಿ ದುಡಿಯಬೇಕಾಗಿದೆ. ಸಾಹಿತ್ಯಕ್ಷೇತ್ರದಲ್ಲಿ ಮಾಡತಕ್ಕ ಕೆಲಸವು ಬಹಳವಿದೆ. ಈಗ ಸಾಧಿಸಿದುದು ಅತ್ಯಲ್ಪ. ಈಗ ಕನ್ನಡ ವಿಷಯವನ್ನು ಎಂ.ಎ. ವರ್ಗದವರಿಗೆ ಕಲಿಸುವ ವ್ಯವಸ್ಥೆ ಮುಂಬಯಿ, ಪುನಾ, ಮೈಸೂರು, ಮದ್ರಾಸ್, ಉಸ್ಮಾನಿಯಾ-ಈ ವಿಶ್ವವಿದ್ಯಾನಿಲಯಗಳಲ್ಲಿ ಆಗಿದೆ. ಈ ವಿಷಯದಲ್ಲಿ ತಜ್ಞರಾದ ಪ್ರಾಧ್ಯಾಪಕರು ಕೆಲಸಮಾಡುತ್ತಿರುವರು. ಈ ಎಲ್ಲ. ಪ್ರಾಧ್ಯಾಪಕರೂ ಕೂಡಿ ವಿಶ್ವವಿದ್ಯಾನಿಲಗಳಲ್ಲಿ ಕನ್ನಡ ಮಟ್ಟವನ್ನು ಏರಿಸಬೇಕಾಗಿದೆ. ಇವೆಲ್ಲ ವಿಶ್ವವಿದ್ಯಾನಿಲಯಗಳ ಅಧಿಕಾರಿಗಳೂ ಈ ಕಾರ್ಯದಲ್ಲಿ ಸಹಾಯ ಮಾಡಬೇಕು. ಕರ್ನಾಟಕ ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳ ಮೇಲೆ ಹೆಚ್ಚಿನ ಹೊಣೆಯಿದೆ. ಮೈಸೂರು ಸರ್ಕಾರದವರು ಬಹುಕಾಲದಿಂದ ಕನ್ನಡದ ಪ್ರಗತಿಗಾಗಿ ಪ್ರಯತ್ನಪಟ್ಟಿರುವರು. ಇದರಂತೆ ಮುಂಬಯಿ ಸರ್ಕಾರವೂ ಕರ್ನಾಟಕ ವಿಶ್ವವಿದ್ಯಾಲಯದ ಮುಖಾಂತರ ಕನ್ನಡವನ್ನು ಪ್ರೋತ್ಸಾಹಿಸಬೇಕು.		-ಎಸ್. ಸಿ. ನಂದಿಮಠ

ಬಂಧುಗಳೇ, ನಾವು ಎಂಥ ಅಮೂಲ್ಯವಾದ ಪಿತ್ರಾರ್ಜಿತ ಆಸ್ತಿಗೆ ಹಕ್ಕುದಾರರೆನ್ನುವುದು ಮರೆಯದಿರೋಣ. ಅದರ ಹಿರಿಮೆಗರಿಮೆಗಳನ್ನು ನೆನೆದಾಗ ಮೈಪುಳಕಗೊಳ್ಳುತ್ತದೆ. ನಮ್ಮ ನುಡಿ ಅತ್ಯಂತ ಪ್ರಾಚೀನವಾದದ್ದು; ಇಂದು ಅಂತಾರಾಷ್ಟ್ರೀಯ ಖ್ಯಾತಿಗೆ ಪಾತ್ರವಾಗಿ ಮೆರೆಯುತ್ತಿರುವ ಭಾಷೆಗಳು ಇನ್ನೂ ಭ್ರೂಣಾವಸ್ಥೆಯಲ್ಲಿದ್ದಾಗಲೇ ವಿಶ್ವಸಾಹಿತ್ಯದ ಮಟ್ಟಕ್ಕೇರಬಲ್ಲ ಮೇರುಕೃತಿಗಳಿಗೆ ಜನ್ಮನೀಡಿದ ಭಾಷೆಯಿದು; ಇನ್ನೂ ನೆರೆಹೊರೆಯ ರಾಜ್ಯಗಳು ಕಣ್ಣುಬಿಡದಿದ್ದಾಗ ಭರತಖಂಡದಲ್ಲಿ ನಾಯಕ ಸ್ಥಾನದಲ್ಲಿದ್ದ ನಾಡು ನಮ್ಮದು; ಹಿಂದೂ ಸಂಸ್ಕೃತಿಯನ್ನು ರಕ್ಷಿಸಿದ ವಿಜಯನಗರ ಸಾಮ್ರಾಜ್ಯವನ್ನು ಸೃಷ್ಟಿಸಿದ ಹಿರಿಯ ನಾಡು ಇದಲ್ಲದೆ ಸರ್ವಮತಧರ್ಮಗಳ ಆಡುಂಬೊಲವಾಗಿ ಮತಸಹಿಷ್ಣುತೆಗೆ ಹೆಸರಾದ ನಾಡು ಇದಲ್ಲದೆ ಬೇರೊಂದಿಲ್ಲ; ಕರ್ಣಾಟಕ ಸಂಗೀತದ ಜನ್ಮಭೂಮಿ, ಶಿಲ್ಪಕಲೆಯ ತವರು, ಚಿತ್ರಕಲೆಯ ಸೀಮೆ ನಮ್ಮದು; ಇಮ್ಮಡಿ ಪುಲಿಕೇಶಿ ವಿಷ್ಣುವರ್ಧನ ಶಾಂತಲೆ ನೃಪತುಂಗ ಕೃಷ್ಣ ಮೂರನೆಯ ಗೋವಿಂದರ, ಬಸವ ವಿದ್ಯಾರಣ್ಯರ, ಶಾಞರ್ಗ್‌ದೇವ ವಿe್ಞÁನೇಶ್ವರರ, ಜಿನಸೇನ ಗುಣಭದ್ರರ, ಡಂಕಣ ಜಕಣರ, ಪಂಪ ರನ್ನ ಹರಿಹರ ರಾಘವಾಂಕ ನಾರಣಪ್ಪ ಪುರಂದರದಾಸ ಕನಕದಾಸರ, ಇನ್ನೂ ಎಷ್ಟೆಷ್ಟೋ ಕವಿಗಳ ಕಲೆಗಳ ದೊರೆಗಳ ಕಲಾವಿದರ ಸಂತರ ಶರಣರ ದಾಸರ ಕರ್ಣಾಟಕ ಸಂಸ್ಕೃತಿಯನ್ನು ಬೆಳೆಸಿ, ಭಾರತೀಯ ಸಂಸ್ಕೃತಿಯನ್ನು ಬೆಳಗಿದ ಮಹಾಮಹಿಮರ ಪೀಳಿಗೆಗೆ ಸೇರಿದವರೆಂಬ ಹೆಮ್ಮೆ ನಮ್ಮದು; ಈ ಹೆಮ್ಮೆಗೆ ಪಾತ್ರರಾದ ನಾವು ಯಾರಿಗೂ ಕೀಳಲ್ಲ, ಯಾರಿಗೂ ಅಂಜಬೇಕಾಗಿಲ್ಲ, ಯಾರಿಗೂ ತಲೆಬಾಗಬೇಕಾಗಿಲ್ಲ. ಅವರು ಹಿಂದೆ ಬಿಟ್ಟುಹೋಗಿರುವ ತಪಶ್ಯಕ್ತಿ ನಮಗಿಂದು ರಕ್ಷೆಯ ಪರಿವೇಷವಾಗಿದೆ; ಇಂಥ ಆಸ್ತಿಗೆ ಹಕ್ಕುದಾರರಾದ ನಾವು ದರಿದ್ರರಲ್ಲ, ಆಗರ್ಭ ಶ್ರೀಮಂತರು. ನುಡಿಯ ಅಳಿವುಳಿವು. ನಮ್ಮ ಅಳಿವುಳಿವು ; ನಾಡುನುಡಿಗಳಿಗೊದಗುವ ಅನ್ಯಾಯ ಅಪಚಾರಗಳನ್ನು ಸಹಿಸೆವು. ನಾಡುನುಡಿಗಳ ಅಭ್ಯುದಯವೊಂದೇ ನಮ್ಮ ಬಾಳಿನ ಏಕೈಕ ಗುರಿ; ಇದಕ್ಕಾಗಿ ನಾವು ಎಂಥ ತ್ಯಾಗಕ್ಕಾದರೂ ಸಿದ್ಧವೆಂದು ಈ ಎಲ್ಲ ಪುರ್ವಜರ ಹೆಸರಿನಲ್ಲಿ, ಜ್ಯೋತಿಶ್ಯರೀರಿಗಳಾಗಿ ಈ ಮಹೋತ್ಸವವನ್ನು ದರ್ಶಿಸುತ್ತಿರುವ ಅವರ ನೇತೃತ್ವದಲ್ಲಿ ನಾವು ದೀಕ್ಷಾಬದ್ಧರಾಗೋಣ.    -ದೇ. ಜವರೇಗೌಡ.

‘ಭಾರತಕ್ಕೆಲ್ಲ ಒಂದೇ ರಾಷ್ಟ್ರಭಾಷೆ, ಅದು ಹಿಂದೀ’ ಎಂಬ ಬಿಸಿಲು ಕುದುರೆಯನ್ನು ಬೆನ್ನಟ್ಟಿ ಹೋದರೆ ಅದರಿಂದ ಯಾರ ಬಾಯಾರಿಕೆಯೂ ಆರುವುದಿಲ್ಲ’. ‘ಕರ್ನಾಟಕದಲ್ಲಿ ಇರುವವರೆಲ್ಲರಿಗೂ ಕನ್ನಡದಲ್ಲಿ ಓದುವುದೂ, ಬರೆಯುವುದೂ, ಮಾತನಾಡುವುದೂ ಚೆನ್ನಾಗಿ ಬರಬೇಕು. ಇದು ಅತ್ಯಂತ ಅಗತ್ಯ’.	- ಜೆ.ಪಿ. ರಾಜರತ್ನಂ.

‘ಸಾಹಿತ್ಯ ಮನುಷ್ಯನಿಗೆ ಕೇವಲ ಮುನುಷ್ಯನಾಗಿರುವವನಿಗೆ ಸಂಬಂಧಪಟ್ಟ ಕ್ರಿಯೆ ಅಲ್ಲದೆ ಯಾವುದೇ ಜಾತಿಗೇ ಆಗಲಿ ಪಂಗಡಕ್ಕೇ ಆಗಲಿ, ವರ್ಗಕ್ಕೇ ಆಗಲಿ ಸೀಮಿತವಾದಂಥವುಗಳಲ್ಲ. ತನ್ನ ವರ್ಗದ, ತನ್ನ ಪರಿಸರದ, ತನ್ನ ಸಂಸ್ಕೃತಿಯ, ತನ್ನ ಭಾಷೆಯ ಮೂಲಕವೇ ಸಹಜವಾಗಿ ವ್ಯಕ್ತಗೊಳ್ಳುವ ಅನುಭವ ಎಲ್ಲ ಭಿನ್ನತೆಗಳನ್ನೂ ಮೀರಿ ನಿಲ್ಲುವಂಥದ್ದು. ಆದ ಕಾರಣವೇ ಪುರಾತನ ಕಾಲದ ಸಾಹಿತ್ಯ ಬೇರೆ ಬೇರೆ ದೇಶ ಭಾಷೆಗಳಲ್ಲಿ ಬೇರೆ ಬೇರೆ ಕಾಲಗಳಲ್ಲಿ ರಚಿತವಾದ ಸಾಹಿತ್ಯ. ನಮ್ಮ ಭಾಷೆ ಯಾವುದೇ ಇರಲಿ ಇಂದೂ ನಾವು ಓದಿ ಸಂತೋಷ ಪಡಲು ಸ್ಫೂರ್ತಿ ಪಡೆಯುವುದು ಸಾಧ್ಯ. ಆದ ಕಾರಣ ಇದು ಬ್ರಾಹ್ಮಣ ಸಾಹಿತ್ಯ. ಇದು ಜೈನ ಸಾಹಿತ್ಯ, ಇದು ವೀರಶೈವ ಸಾಹಿತ್ಯ ಎಂದು ಭೇದ ಹೇಳುವ ಮಾತು ಅರ್ಥಹೀನ ಮಾತ್ರವಲ್ಲ, ಒಂದಾಗಬೇಕಾದ ಸಮಾಜವನ್ನು ಭಗ್ನಗೊಳಿಸುವ ಪ್ರಯತ್ನ ಎಂದೂ ಹೇಳಬೇಕು.	- ಗೋಪಾಲಕೃಷ್ಣ ಅಡಿಗ

ನಮ್ಮ ಬದುಕನ್ನು ನಮ್ಮ ಭಾಷೆ ಬಿಂಬಿಸುತ್ತದೆ. ಅದಕ್ಕೆ ಪರಭಾಷೆಗಳ ಪೀಡೆ ತಪ್ಪಬೇಕು. ಪುಷ್ಟಿ ತುಷ್ಟಿಗಳು ದೊರೆಯಬೇಕು.	- ಡಾ|| ಪು.ತಿ.ನ. 
‘ಕಂನಡ ಪ್ರಥಮ ಭಾಷೆಯಾಗಲು ಕಾಲ್ತೊಡಕು ಉಳಿಯಬಾರದು. ಈ ನೆಲದ ಶಿಕ್ಷಣ ಕ್ರಮದಲ್ಲಿ ಕಂನಡವೇ ಪ್ರಥಮ ಭಾಷೆಯಾಗಿರಬೇಕಾದುದು ನ್ಯಾಯ. ಸಂಸ್ಕೃತವನ್ನು, ಇಂಗ್ಲೀಷನ್ನು ಪ್ರಥಮ ಭಾಷೆಗೆ ಎಳೆದು ತಂದು ಕಂನಡದ ಪ್ರಗತಿಗೆ ಅಡ್ಡಗಾಲು ಹಾಕುವುದು ಸಮಂಜಸವಲ್ಲ’	- ಶಂ.ಬಾ. ಜೋಷಿ

ಭಾಷೆಯಿರುವುದೇ ಮಾನವನಿಗಾಗಿ, ಅದು ಅಂತಿಮ ಗುರಿಯಲ್ಲ. ಅಂತಿಮ ಗುರಿ ಮಾನವನ ಸಮಾಜದ ಶ್ರೇಯಸ್ಸು, ಭಾಷೆ ಎನ್ನುವುದು ಮಾನವನ ಸಂಸರ್ಗಕ್ಕೆ ಸಾಧನ. ಸಾಹಿತ್ಯ ಎನ್ನುವುದು ಭಾಷೆಯ ಸುಂದರತಮ ರೂಪ...... ಕನ್ನಡ ಪುಷ್ಪವಾಗಬೇಕಾದರೆ ಅದನ್ನು ಎಲ್ಲ ಕ್ಷೇತ್ರಗಳಲ್ಲೂ ಬೆಳೆಸಬೇಕು ‘ಇಂಗ್ಲಿಷಿನಿಂದಾಗಿ ನಾವು ಪರಕೀಯ ಸಂಸ್ಕೃತಿಗೆ ದಾಸರಾದೆವು. ಅದು ನಮ್ಮ ಸಂಸ್ಕೃತಿಗೆ ಮಾರಕ ಎಂಬ ವಾದವನ್ನು ನಾನು ಇದುವರೆಗೆ ವಿರೋಧಿಸಿದ್ದೇನೆ. ಆದರೆ ಇನ್ನೊಂದು ಆಪಾದನೆಯನ್ನು ಭಾಗಶಃ ಆದರೂ ಒಪ್ಪದಿರಲಾರೆ. ನಾವು ಪಾಶ್ಚಾತ್ಯ ಸಂಸ್ಕೃತಿಗೆ ದಾಸರಾಗದಿದ್ದರೂ ಇಂಗ್ಲಿಷ್ ಭಾಷೆಗೆ ಸ್ವಲ್ಪ ದಾಸರದದ್ದುಂಟು.		- ಎ.ಎನ್.ಮೂರ್ತಿರಾವ್

‘ಕನ್ನಡಿಗರೇ, ನಿಮ್ಮ ಕನ್ನಡವನ್ನು ಇಂಡಿಯ ದೇಶದ ದಕ್ಷಿಣ ಭಾಗದಲ್ಲಿ ಒಂದು ಅಂಗೈ ಅಗಲ ಬಿಟ್ಟರೆ ಮತ್ತೆಲ್ಲಿ ನೋಡಲಾರಿರಿ. ನೀವು ಅದನ್ನು ಎತ್ತಿ ಹಿಡಿಯಲಾರರೆ. ಅದು ಹೋದರೆ ಹೋಗಲಿ ಎನ್ನುವ ಹಾಗಿದ್ದರೆ ಈ ಕಡೆ ಬಂಗಾಲ ಕೊಲ್ಲಿ ಇದೆ, ಆ ಕಡೆ ಅರಬ್ಬಿ ಸಮುದ್ರ ಇದೆ, ಗುಡಿಸಿ ಹಾಕಿ ಬಿಡಿ, ಇತರ ಭಾಷೆಗಳು ಒತ್ತಿಕೊಂಡು ಬರಲಿ, ಆಕ್ರಮಿಸಿಕೊಳ್ಳಲಿ’.	- ಹಾ.ಮಾ.ನಾಯಕ

‘ಮನುಷ್ಯನಿಂದ ಹುಟ್ಟಿದುದು ಮಾತು. ಆದರೆ ನರನನ್ನು ಮಾನವನನ್ನಾಗಿ ಮಾಡಿದುದು ಮಾತು........... ಜ್ಞಾನ-ವಿಜ್ಞಾನ ಕಲೆಗಳೆಲ್ಲ ಮಾತಿನಲ್ಲಿಯೇ ಮೈದಾಳಬೇಕು. ಮಾತುಗಳಲ್ಲೆಲ್ಲ ಮಾತೆ ಕಲಿಸಿದ ಮಾತೇ ಅವರವರಿಗೆ ಜೀವಾತು......... ಮಾತೃಭಾಷೆಯಾದ ಕನ್ನಡ ನಮ್ಮೆಲ್ಲರ ಪುಣ್ಯಾಭ್ಯುದಯಕ್ಕೆ, ಸರ್ವಾಂಗೀಣ ಪ್ರಗತಿಗೆ ಮೂಲಾಧಾರ, ಪ್ರಯತ್ನ ಬಲದಿಂದ ಮಾನವನ ಬುದ್ಧಿಯ ಭಾಷೆ ಯಾವುದಾದರೂ ಆಗಬಹುದು........ ಅದೂ ಅಪುರ್ಣವಾಗಿ ಆದರೆ ಅವನ ಹೃದಯದ ಭಾಷೆಯಾಗಬಲ್ಲದು ‘ಒಂದೇ ಒಂದು’, ಅದೇ ಅವನ ಮಾತೃಭಾಷೆ’ ಇಷ್ಟೇ ಅಲ್ಲ. ಬೇರೆ ಭಾಷೆಯನ್ನು ಕಲಿಯಲು ಪಡಬೇಕಾದ ಕಷ್ಟದ ನೂರರಲ್ಲೊಂದು ಪಾಲು ಕಷ್ಟ ಪಟ್ಟರೂ ಅದು ಹೃದಯದ ಭಾಷೆಯ ಜೊತೆಗೆ ಬುದ್ಧಿಯ ಭಾಷೆಯೂ ಆಗುವುದು. ಆದುದರಿಂದಲೇ ಕನ್ನಡೀಕರಣವೇ ಕನ್ನಡಿಗರ ಸಮುದ್ಧರಣಕ್ಕೆ ಸಂಜೀವಿನೀ ಶಕ್ತಿ’.	- ಸಿದ್ಧಯ್ಯ ಪುರಾಣಿಕ್
‘ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ, ದಲಿತ ಮುಂತಾದ ಕಾವ್ಯ ಪ್ರಕಾರಗಳು ಒಂದೇ ಹೊಳೆಯ ಹಲವಾರು ಘಟ್ಟಗಳು. ನೀರು ಶುಚಿಯಾಗಿದ್ದರೆ ಎಲ್ಲಿ ಮಿಂದರೂ ಪುಣ್ಯ ಲಭಿಸುತ್ತದೆ. ಇನ್ನು ಈ ಶತಮಾನದ ಮುಗಿವಿನೊಳಗೆ ಇನ್ನೆಷ್ಟು ಪ್ರಕಾರಗಳು ಬರುತ್ತವೋ ಯಾರು ಬಲ್ಲರು?’	- ಕೆ.ಎಸ್.ನರಸಿಂಹಸ್ವಾಮಿ

‘ಜಗತ್ತಿನಲ್ಲಿ ಅನ್ಯ ಭಾಷೆಗಳ ಬಗ್ಗೆ ಪ್ರೇಮ ತಮ್ಮ ಭಾಷೆಯ ಬಗ್ಗೆ ನಿರಭಿಮಾನ ಯಾರಲ್ಲಿಯಾದರೂ ಇದ್ದರೆ ಅದು ಕನ್ನಡಿಗರಲ್ಲಿ ಎಂದು ಧಾರಾಳವಾಗಿ ಹೇಳಬಹುದು’		- ಸಿಂಪಿ ಲಿಂಗಣ್ಣ

‘ಒಟ್ಟಿನಲ್ಲಿ ಜನಮನದಿಂದ ತೇಲಿ ಬಂದ ಬೆಣ್ಣೆ ಕೈಗೆ ಸಿಕ್ಕುವ ಮೊದಲೇ ಕರಗಿ ಹರಿದು ಹೋಗುತ್ತಿದೆ. ಹಾಡುವವರು ಕಣ್ಮರೆಯಾದರೆ ಜಾನಪದ ಸಾಹಿತ್ಯವೂ ಕಣ್ಮರೆಯಾದಂತೆ. ಹಾಗೆ ಕಣ್ಮರೆಯಾಗುವ ಮುನ್ನ ಅದನ್ನು ಸಂಗ್ರಹಿಸುವುದು ನಮ್ಮ ಆದ್ಯ ಕರ್ತವ್ಯ. ಜಾನಪದ ಸಾಹಿತ್ಯವನ್ನು ಕಳೆದುಕೊಂಡ ಕನ್ನಡ ಭಾಷೆ ಹಾಗೂ ಸಾಹಿತ್ಯ ತಾಯಿ ತಂದೆಗಳನ್ನು ಕಳೆದುಕೊಂಡ ತಬ್ಬಲಿಯಂತಾಗುತ್ತದೆ. ಹಣ ಕೊಟ್ಟರೆ ಮುಂದೆ ಏನಾದರೂ ಸಿಕ್ಕಬಹುದು. ಆದರೆ ಜಾನಪದ ಸಾಹಿತ್ಯ ಸಿಕ್ಕುವುದಿಲ್ಲ. ಶರಾವತಿಯನ್ನು ಈಗ ಉಪಯೋಗಿಸಿಕೊಳ್ಳದಿದ್ದರೆ ಮುಂದೆ ಉಪಯೋಗಿಸಿಕೊಳ್ಳಬಹುದು’.			- ಎಚ್.ಎಲ್.ನಾಗೇಗೌಡ

‘ಕರ್ನಾಟಕದಲ್ಲಿ ಭಾಷಾ ಅಲ್ಪ ಸಂಖ್ಯಾತರಿಗೆ ಕೊಡುತ್ತಿರುವ ಸೌಲಭ್ಯಗಳು ಬೇರೆ ಯಾವ ರಾಜ್ಯದಲ್ಲಿಯೂ ಕಂಡು ಬರುವುದಿಲ್ಲವೆನ್ನುವುದನ್ನು ಭಾಷಾ ಆಯೋಗ ಒಪ್ಪಿಕೊಂಡಿದೆ. ಧಾರವಾಡ, ಕಲಬುರ್ಗಿ, ಆಕಾಶವಾಣಿ ನಿಲಯಗಳು ನಿಷ್ಠೆಯಿಂದ ಮರಾಠಿ ಕಾರ್ಯಕ್ರಮಗಳನ್ನು ಬಿತ್ತರಿಸುವುದಷ್ಟೇ ಅಲ್ಲದೆ ವಂದನಾ ಗೀತೆಗಳಲ್ಲಿ ನೆರೆಹೊರೆಯ ಭಾಷಾ ಗೀತೆಗಳಿಗೆ ಧಾರಾಳವಾಗಿ ಎಡೆಗೊಡಲಾಗುತ್ತಿದೆ. ನೆರೆಹೊರೆಯ ರಾಜ್ಯಗಳು ಈ ನೀತಿಯನ್ನು ಅನುಸರಿಸಿದರೆ ಪರಸ್ಪರ ಬಾಂಧವ್ಯ ಬೆಳೆಯಲು ಸಾಧ್ಯ’.			- ಚೆನ್ನವೀರ ಕಣವಿ

‘ಇಂಗ್ಲಿಷಿನಲ್ಲಿ ಓದುವ ನಮ್ಮ ಮಕ್ಕಳು, ಮೊಮ್ಮಕ್ಕಳಲ್ಲಿ ಯಾರಿಗಾದರೂ ಸಾಹಿತ್ಯ ಸೃಷ್ಟಿಯ ಶಕ್ತಿ ಇದ್ದರೆ ಅವರು ಮುಂದೆ ಕನ್ನಡದಲ್ಲಿ ಬರೆಯಲು ಸಾಧ್ಯವಿಲ್ಲ. ಹೀಗಾಗಿ ಸಾವಿರದ ಐನೂರು ವರ್ಷಗಳ ಲಿಖಿತ ಇತಿಹಾಸವುಳ್ಳ ಕನ್ನಡ ಸಾಹಿತ್ಯದ ಸೃಜನಶೀಲತೆಯು ಇನ್ನು ಕೆಲವೇ ದಶಕಗಳಲ್ಲಿ ನಿಂತು ಹೋಗುವ ಸಂಭವ ಇದೆ. ಈ ಮುಂದಿನ ತಲೆಮಾರು ಇಂಗ್ಲಿಷಿನಲ್ಲಾದರೂ ಸಾಹಿತ್ಯ ಸೃಷ್ಟಿಸುವುದು ಸಾಧ್ಯವಿಲ್ಲ. ಏಕೆಂದರೆ ಅದು ಅವರ ಇಡೀ ಜನಾಂಗದ ಸಂಸ್ಕೃತಿಯನ್ನು ಅಭಿವ್ಯಕ್ತಿಸಿರುವ ಭಾಷೆಯಲ್ಲ, ಭಾವ, ಬುದ್ಧಿ ಮನಸ್ಸುಗಳು ಕೊನೆಯ ಪಕ್ಷ ಬಾಲ್ಯ ಕಳೆಯುವ ತನಕವಾದರೂ ಎಂದರೆ ಎಸ್.ಎಸ್.ಎಲ್.ಸಿ. ಕಳೆಯುವವರೆಗಾದರೂ ಪರಿಸರದ ಭಾಷೆಯ ಮೂಲಕ ಬೆಳೆಯದಿದ್ದರೆ ಭಾವೀ ಜೀವನದಲ್ಲಿ ಆ ಭಾಷೆಯನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಿಲ್ಲ. ಎಸ್.ಎಸ್.ಎಲ್.ಸಿ. ಮುಗಿಯುವವರೆಗಾದರೂ ಕರ್ನಾಟಕದಲ್ಲಿ ಕನ್ನಡವೇ ಶಿಕ್ಷಣ ಮಾಧ್ಯಮವಾಗಬೇಕು’			- ಎಸ್.ಎಲ್.ಭೈರಪ್ಪ

ಭಾರತದ ಬಹುತೇಕ ರಾಜ್ಯಗಳು, ಕರ್ನಾಟಕವಂತೂ ಮುಖ್ಯವಾಗಿ, ಬಹುಭಾಷಾ ವಲಯಗಳು. ನಾವು ಯೂರೋಪಿನಂತೆ ಒಂದೇ ಭಾಷೆ, ಒಂದೇ ಮತ, ಒಂದೇ ರೇಸಿನ ರಾಷ್ಟ್ರವು ಅಲ್ಲ. ರಾಜ್ಯಗಳೂ ಅಲ್ಲ, ಆದ್ದರಿಂದ ಯೂರೋಪಿನಲ್ಲಿರುವಂತೆ ನಮ್ಮಲ್ಲಿ ಖಚಿತವಾದ ಮಾತೃಭಾಷೆಯೆಂಬುದಿಲ್ಲ. ಅದರ ಬದಲಾಗಿ ನಮ್ಮಲ್ಲಿ ಹಲವರಿಗೆ ಮನೆ ಮಾತೊಂದು ಇರುತ್ತದೆ, ದೇಶದ ಮಾತೊಂದು ಇರುತ್ತದೆ. ದೇಶದ ಆಚೆಗಿನ ಸಂಪರ್ಕಕ್ಕಾಗಿ ಇನ್ನೊಂದು ಮಾತು ಇರುತ್ತದೆ. ಮಾತೃಭಾಷೆಯೆಂಬುದು ‘ಮದರ್ ಟಂಗ್’ನ ಅನುವಾದ, ಕನ್ನಡ ರಾಜ್ಯ ಭಾಷೆಯಾಗದಂತೆ, ಶಿಕ್ಷಣ ಮಾಧ್ಯಮವಾಗದಂತೆ ತಡೆಯಲು ಇಂಗ್ಲಿಷ್ ಭಾಷೆಯ ವ್ಯಾಮೋಹಿಗಳು ಬಳಸುವ ಅಸ್ತ್ರವೇ ‘ಮದರ್ ಟಂಗ್’ ಕಲ್ಪನೆ.	- ಯು.ಆರ್.ಅನಂತಮೂರ್ತಿ

ಕನ್ನಡದ ಆಚಾರ್ಯಪುರುಷರಾದ ಬಿ.ಎಂ.ಶ್ರೀಕಂಠಯ್ಯ ಅವರು ತೊಂಬತ್ತು ವರ್ಷಗಳ ಹಿಂದೆ 1911ರಲ್ಲಿ ತಮ್ಮ ಮೊದಲ ಸಾರ್ವಜನಿಕ ಭಾಷಣವನ್ನು, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಕೊಟ್ಟರು. ಆಗ ಅವರು ತಮ್ಮ ಭಾಷಣಕ್ಕೆ ಆರಿಸಿಕೊಂಡ ವಿಷಯ “ಕನ್ನಡ ಮಾತು ತಲೆಯೆತ್ತುವ ಬಗೆ” ಅವರು ಆ ಮಾತು ಹೇಳಿ ಒಂದು ಶತಮಾನವೇ ಸಮೀಪಿಸುತ್ತ ಬಂದಿದ್ದರೂ, ಅಂದು ಬಿ.ಎಂ.ಶ್ರೀ. ಅವರು ಆಡಿದ ಮಾತನ್ನೇ ಬಿಡಲಾಗದ ಒಂದು ಧಾರ್ಮಿಕ ವಿಧಿಯಂತೆ ಇಂದೂ ಹೇಳುತ್ತಿದ್ದೇವೆ........’
ಆ ಮಾತು ತನ್ನ ಪ್ರಸ್ತುತತೆಯನ್ನು ಇನ್ನೂ ಕಳೆದುಕೊಂಡಿಲ್ಲ. ಕನ್ನಡಕ್ಕೋಸುಗ ಕೈಎತ್ತಿ ನಿಲ್ಲಬೇಕೆಂದು ಕರ್ನಾಟಕ ಸರಕಾರಕ್ಕೆ, ಕನ್ನಡಿಗರು ಕೈಯೆತ್ತಿ ಹೇಳಬೇಕಾದ ಪ್ರಸಂಗ ಇನ್ನೂ ಇದೆಯೆನ್ನುವುದು ನಾವೆಲ್ಲರೂ ವ್ಯಸನಪಡಬೇಕಾದ ದುರದೃಷ್ಟಕರ ಸಂಗತಿ.	- ಪಾಟೀಲ ಪುಟ್ಟಪ್ಪ

“ಇದು ವೈಜ್ಞಾನಿಕ ಯುಗ, ಹೈಟೆಕ್ ಕಾಲ. ಕೈಗಾರಿಕಾದಿ ಉದ್ಯಮಗಳಿಗೆ, ಗಣಕ ಯಂತ್ರಗಳಿಗೆ, ತಂತ್ರಾಂಶಗಳಿಗೆ, ಕಂಪ್ಯುಟರಿಗೆ ಆದ್ಯತೆ. ಅದರಿಂದ ಸಾಹಿತ್ಯದ ಅಗತ್ಯ ಇದೆಯೆ”- ಎಂಬ ಪ್ರಶ್ನೆ ಎದ್ದಿದೆ. ಯಾವ ಯುಗದಲ್ಲೂ ಸಾಹಿತ್ಯವನ್ನು ಗೌಣವೆಂದು ಗುಡಿಸಿ ಹಾಕುವಂತಿಲ್ಲ. ಸಾಹಿತ್ಯ ಶಾಸ್ತ್ರವೂ ಹೌದು, ವಿಜ್ಞಾನವೂ ಹೌದು, ಮನೋವಿಜ್ಞಾನವೂ ಹೌದು. ವಿಜ್ಞಾನ, ತಂತ್ರಜ್ಞಾನ ಹಾಗೂ ಸಮಸ್ತ ಜ್ಞಾನಗಳ ಕಲಿಕೆಗೆ ಕನ್ನಡ ಸಶಕ್ತವಾಗಿದೆಯೆಂದು ಜಗತ್ತಿಗೆ ತೋರಿಸಲು ವಿಜ್ಞಾನಿಗಳು ಕನ್ನಡವನ್ನು ಬಳಸಬೇಕು.

ತಂತ್ರಜ್ಞಾನದ ನಿರಾಕರಣೆ ಸಲ್ಲದು. ಕನ್ನಡ ಜಗತ್ತಿಗೆ ತಂತ್ರಜ್ಞಾನದ ಪ್ರವೇಶ ಸ್ವಾಗತಾರ್ಹ. ಎರಡು ದಶಕಗಳಿಂದಲೂ ಈ ನಿಟ್ಟಿನಲ್ಲಿ ಕೆಲಸ ನಡೆಯುತ್ತಿರುವುದು ಸಂತಸದಾಯಕ ಸಂಗತಿ. ತಂತ್ರಜ್ಞಾನವನ್ನು ಒಂದು ಭಾಷೆಗೆ ತರುವಾಗ ತಂತ್ರಜ್ಞಾನದ ಸಲಕರಣೆಗಳ(ಟೆಕ್ನಾಲಜಿ ಟೂಲ್ಸ್‌) ನಿರ್ಮಾಣ ಆಯಾ ಭಾಷೆಯ ಜಾಯಮಾನ ಮತ್ತು ಸಾಂಸ್ಕೃತಿಕ ವಿನ್ಯಾಸಕ್ಕೆ ಧಕ್ಕೆಯಾಗದಂತೆ ನಿರ್ಮಿಸಬೇಕು. ಜೊತೆಗೆ ತಂತ್ರಜ್ಞಾನವೆಂದಾಕ್ಷಣ ಕನ್ನಡತನವನ್ನು ಕ್ಲಿಷ್ಟಗೊಳಿಸಲಾಗಲಿ ನಷ್ಟಗೊಳಿಸಲಾಗಲಿ ಸಂಯೋಜಿಸಲಾಗುತ್ತಿಲ್ಲಎಂಬ ಅಂಶ ಆದರ್ಶವಾಗಿರಬೇಕು. 

ಬಹುತಾಂತ್ರಿಕ ಆಧುನೀಕರಣ ಮತ್ತು ಜಾಗತೀಕರಣದ ತುಡಿತದಿಂದಾಗಿ ಪ್ರಾದೇಶಿಕ ಭಾಷೆಯ ಯುವ ಪ್ರತಿಭೆಗಳು ಮಾತೃಭಾಷೆಯನ್ನು ತೊರೆದು ಇ-ಶಿಕ್ಷಣಕ್ಕೆ ಪಲಾಯನ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಮೊದಲೇ ಪರಿಮಿತವಾಗಿದ್ದ ಪ್ರಾದೇಶಿಕ ಭಾಷೆಗಳ ಓದುಗರ ಪ್ರಮಾಣ ಈಗ ಮತ್ತಷ್ಟು ಇಳಿಮುಖಗೊಂಡಿದೆ. ಇಂಥ ಇಳಿಗಾಲದಲ್ಲಿ ಕನ್ನಡಕ್ಕೆ ಉಳಿಗಾಲ ಎಲ್ಲಿ, ಹೇಗೆ ಎಂಬುದು ಗಂಭೀರ ಪರಿಭಾವನೆಯ ಸಮಸ್ಯೆ. ಇದನ್ನು ಮತ್ತಷ್ಟು ಉಲ್ಬಣಗೊಳಿಸಿರುವುದು ಹೊಸ ಪೀಳಿಗೆ ತಾಯಿಭಾಷೆಯ ಹೊಕ್ಕಳ ಬಳ್ಳಿಯಿಂದ ಕಳಚಿಕೊಳ್ಳುತ್ತಿರುವುದಲ್ಲದೆ ತಾಯಿಭಾಷೆಯ ಸಾಹಿತ್ಯದಿಂದಲೂ ದೂರ ಸರಿಯುತ್ತಿರುವುದು. ಸವಾಲುಗಳು ಹೀಗೆ ಸಂಕೀರ್ಣಗೊಳ್ಳುತ್ತ ಸಾಗುತ್ತಿರುವಾಗ ಅದಕ್ಕೆ ಸಡ್ಡು ಹೊಡೆದು ಸಜ್ಜಾಗಿ ನಿಲ್ಲುವ ಕಸುವು ಇದೆಯೆ ಎಂಬ ಶೋಧನೆಯ ತುರ್ತು ಒದಗಿದೆ.			- ಕಮಲಾ ಹಂಪನಾ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ